ಪನ್ನ ವಜ್ರ ಗಣಿಗಳು -
ಮಧ್ಯ ಪ್ರದೇಶದ ವಿಂಧ್ಯ ಪರ್ವತ ಶ್ರೇಣಿಯ ಪಾಶ್ರ್ವದ ಬಂಡೇಲ್‍ಖಂಡದಲ್ಲಿರುವ ವಜ್ರಗಣಿಗಳು.  ಇಲ್ಲಿ ವಜ್ರಗಳನ್ನು ಕಂಗ್ಲಾಮರೇಟುಗಳಲ್ಲಿ (ಪೆಂಟೆಕಲ್ಲು) ಮತ್ತು ಅವುಗಳಿಂದ ಉತ್ಪತ್ತಿಯಾಗುವ ಮರಳಿನಿಂದ ಪಡೆಯಲಾಗಿದೆ.  ಸುಮಾರು 96 ಕಿಮೀ ಉದ್ದದ ಮತ್ತು 16 ಕಿಮೀ ಅಗಲದ ವಲಯದಲ್ಲಿ ಅವು ಲಭ್ಯವಾಗಿವೆ. ಮುನ್ನಿನ ಸಾಮಂತರಾಜ್ಯಗಳಾದ ಪನ್ನ, ಚಾರ್‍ಕಾರಿ, ಬಿಜವಾರ, ಅಜಾರಿಫರ್, ಬರಾಂಡ ಮತ್ತು ಚೋಬಾಪುರ ಮುಂತಾದ ಸ್ಥಳಗಳಲ್ಲಿ ಹಿಂದೆ ತೋಡಲಾದ ವಜ್ರಗಣಿಗಳಿವೆ.  ವಿಂಧ್ಯ ಸ್ತೋಮದಲ್ಲಿ ವಜ್ರಗಳನ್ನು ಒಳಗೊಂಡಿರುವ ಪ್ರಸ್ತರಗಳನ್ನೂ ಅವುಗಳ ಸ್ಥಾನಗಳನ್ನೂ ಈ ಕೆಳಗಿನ ಶ್ರೇಣಿಯಲ್ಲಿ ಕೊಡಲಾಗಿದೆ :

		ಭಂಡರ್ ಶ್ರೇಣಿಗಳು.  ವಜ್ರಗಳನ್ನು
		ಒಳಗೊಂಡಿರುವ ಕಂಗ್ಲಾಮರೇಟ್. 
ವಿಂಧ್ಯನ್ ಮೇಲ್ಭಾಗ		ರೇವಾ   ಶ್ರೇಣಿಗಳು.
		ವಜ್ರಗಳನ್ನು ಒಳಗೊಂಡಿರುವ ಕಂಗ್ಲಾಮರೇಟ್.  
ಕೈಮೂರ್ ಶ್ರೇಣಿಗಳು.

	ಕೈಮೂರ್  ಶ್ರೇಣಿಗಳ ಮೇಲುಭಾಗದ ಮರಳುಶಿಲೆಗೂ ಪನ್ನ ಜೇಡುಶಿಲೆಗೂ ನಡುವೆ ವಜ್ರಗಳನ್ನು  ಒಳಗೊಂಡಿರುವ ತೆಳುವಾದ ಕಂಗ್ಲಾಮರೇಟ್ ಪದರವೆಂದು ಪನ್ನಾದ ಸಮೀಪದಲ್ಲಿ ಕಂಡುಬರುತ್ತದೆ. ಈ ಪದರದ ಸ್ಥಳೀಯ ಹೆಸರು ಮುದ್ದ ಎಂದು. ಇದರ ದಪ್ಪ 61 ಸೆಂ.ಮೀ,  ಆದರೆ ಇದು ಅಖಂಡವಾಗಿಲ್ಲ.  ಇಲ್ಲಿಂದ ಮುಂದೆ ಪೂರ್ವಕ್ಕೆ ಅಂದರೆ, ಇಟ್ವಾದ ಸಮೀಪಕ್ಕೆ 6 ರಿಂದ 7.5 ಮೀಟರುಗಳಷ್ಟು ದಪ್ಪವಾದ ಜೇಡು ಮತ್ತು ಸುಣ್ಣ ಶಿಲೆಗಳ ಪದರಗಳಿಂದ ಮತ್ತು ಕೈಮುರ್ ಮರಳು ಶಿಲೆಗಳ ಪದರಗಳಿಂದ ಈ ತೆಳುವಾದ ಕಂಗ್ಲಾಮರೇಟ್ ಪದರ ಪ್ರತ್ಯೇಕಿಸಲ್ಪಟ್ಟಿದೆ.

	ವಜ್ರಗಳನ್ನು ಒಳಗೊಂಡಿರುವ ಮತ್ತೊಂದು ಕಂಗ್ಲಾಮರೇಟ್ ಪದರ ರೇವಾ ಮರಳು ಶಿಲೆಗಳ ಮೇಲು ಭಾಗದಲ್ಲೂ ಭಂಡರ್ ಶ್ರೇಣಿಗಳ ಕೆಳಭಾಗದಲ್ಲೂ ಕಂಡುಬರುತ್ತದೆ. ಈ ಕಂಗ್ಲಾಮರೇಟಿನಲ್ಲಿ ಜಾಸ್ಪರಿಗೆ ಬದಲು ಸಾಮಾನ್ಯ ಉರುಟು ಬೆಣಚಿನ ಶಿಲೆ ಅಥವಾ ಸಿರ ಪನ್ನಾದ ಕೆಳಭಾಗದ ಕಂಗ್ಲಾಮರೇಟಿನಲ್ಲಿ ಹೇರಳವಾಗಿ ಕಂಡು ಬರುತ್ತದೆ.

	ಪನ್ನಾ ರಾಜ್ಯದ ವಜ್ರಗಣಿ ಪ್ರದೇಶಗಳು.  1.  ಷಾಹಿದಾನ್ ವಜ್ರಗಣಿಗಳು :  ಇವು ಅತಿ ಸಂಪದ್ಭರಿತವಾದ ಗಣಿಗಳು.  ಇವುಗಳಿಂದ 1916ರದಿಂದಲೂ ವಜ್ರಗಳನ್ನು ಪಡೆಯಲಾಗಿದೆ.  ಇವು ಉತ್ತಮ ದರ್ಜೆಗೆ ಸೇರಿದ್ದು ದೊಡ್ಡ ಗಾತ್ರದವಾಗಿವೆ.

	2.  ಪನ್ನಾ ಸಮೂಹ :  ರಾಣಿಪುರ ಮತ್ತು ಭವಾನಿಪುರದ ವಜ್ರಗಣಿಗಳಿಂದ 1916 ರಿಂದಲೂ ವಜ್ರಗಳನ್ನು ಉತ್ಪಾದಿಸಲಾಗಿದೆ. ಮುದ್ದದಿಂದಾದ (ಕಂಗ್ಲಾಮರೇಟ್) ಶಿಥಿಲೀಕರಣದಿಂದ ಪುನರ್‍ವಿತರಣೆಗೊಂಡ ವಸ್ತುಗಳಿಂದ ಸಹ ವಜ್ರಗಳನ್ನು ಪಡೆಯಲಾಗಿದೆ.  ಶಿಥಿಲೀಕರಣದಲ್ಲಿ ವಿಭಜನೆಯಾಗದ ವಸ್ತಗಳೂ ಇದರಲ್ಲಿ ಸೇರಿವೆ. 

	3. ಭಾಗ್ರಿ ಸಮೂಹ.  ಇಟ್ವ ಕ್ಷೇತ್ರ :  ಷಾಹಿದಾನ್ ವಜ್ರಗಣಿಗಿಂತಲೂ ಇದರ ಪ್ರಾಮುಖ್ಯ ಕಡಿಮೆ ಎನ್ನಬಹುದು.  ಗಣಿಗಳು ಪನ್ನಾ ಜಿಲ್ಲೆಯ ಈಶಾನ್ಯಕ್ಕೆ 21 ಕಿಮೀ. ದೂರದಲ್ಲಿವೆ.  ಇವುಗಳ ಮರಳಿನಿಂದ ವಜ್ರಗಳನ್ನು ಪಡೆಯಲಾಯಿತು.  ಅನೇಕ ವರ್ಷಗಳ ಹಿಂದೆ ಕೆಳಭಾಗದ ಕಂಗ್ಲಾಮರೇಟ್ ಸ್ತರದಲ್ಲಿ ಗಣಿಗಳನ್ನು ತೋಡಲಾಯಿತು.  ಭೂಮಿಯಿಂದ 6 ರಿಂದ 12 ಮೀ. ಆಳದಲ್ಲಿದ್ದ ನೊರಜು ಸ್ತರದಿಂದಲೂ ವಜ್ರಗಳನ್ನು ಸಂಗ್ರಹಿಸಲಾಯಿತು. 

	ಮಜ್‍ಗವಾನ್ ವಜ್ರಗಣಿಗಳು : ಪನ್ನಾದಿಂದ ಸುಮಾರು 22 ಕಿಮೀ ದೂರದಲ್ಲಿ ಇರುವ ಮಜ್‍ಗವಾನ್ ಸಮೀಪದಲ್ಲಿ ಈ ವಜ್ರಗಣಿಗಳಿವೆ. ಇಲ್ಲಿರುವ ಹಳದಿ ವರ್ಣದಿಂದ ಹಿಡಿದು, ಹಳದಿ-ಹಸಿರುವರ್ಣದ ಅಲ್ಟ್ರಾಬೇಸಿಕ್ ಜ್ವಾಲಾಮುಖಿ ಜನಿತ ಶಿಲೆಯಲ್ಲಿ ವಜ್ರಗಳು ಸಿಕ್ಕುತ್ತವೆ.  ಮಜ್‍ಗವಾನ್ ಗಣಿಗಳ ವಜ್ರ ನಿಕ್ಷೇಪಗಳು ದಕ್ಷಿಣ ಆಫ್ರಿಕದ ಕಿಂಬರ್ಲಿ ವಜ್ರ ನಿಕ್ಷೇಪಗಳ ಮಾದರಿಯಲ್ಲೇ ಇರುವುವೆಂದು ಕೆಲವು ವರ್ಷಗಳ ಹಿಂದೆಯೇ ವಿ.ಎಸ್. ದುಬೆ ವರದಿ ಮಾಡಿದ್ದರು.  ಅನಂತರ ಭಾರತೀಯ ಭೂವ್ಶೆಜ್ಞಾನಿಕ ಸರ್ವೆ ಇಲಾಖೆಯವರೂ ಇದರ ಪರಿಶೀಲನೆ ನಡೆಸಿದ್ದಾರೆ.  ಮಜ್‍ಗವಾನ್ ಗಣಿಯಲ್ಲಿರುವ ನಳಿಗೆ ಸ್ವಲ್ಪ ತಗ್ಗುಭಾಗದಲ್ಲಿದೆ ಮತ್ತು ಹಲವು ಹೆಕ್ಟೇರುಗಳಷ್ಟು ವಿಶಾಲವಾದ ಪ್ರದೇಶವನ್ನು ಆಕ್ರಮಿಸಿದೆ. ಇದರ ಮೇಲುಭಾಗಕ್ಕೆ ಚಾಚಿದ ಶಿಲೆ ಟೂಫ್ ರಚನೆಯುಳ್ಳ ರಂಧ್ರಭರಿತವಾದ ಸರ್ಪಿಲ (ಸರ್ಪೆಂಟೈನ್) ಮತ್ತು ಸುಣ್ಣ ಶಿಲೆಯಿಂದ ಕೂಡಿದ ವಸ್ತುಗಳಿಂದ ರೂಪುಗೊಂಡಿರುವುದು ಕಂಡು ಬರುತ್ತದೆ.

	ಈ ಪ್ರದೇಶಗಳಲ್ಲಿ ಸುಮಾರು 30 ಮೀಟರ್ ಆಳದ ರಂಧ್ರವನ್ನು ಕೊರೆದು ಪರೀಕ್ಷಿಸಲಾಯಿತು. ಈ ಟೂಫ್ ಶಿಲೆ ಗಡುಸಾದ ಕಪ್ಪು ಬಣ್ಣದ, ಹಸುರು ಬೂದು ಬಣ್ಣದ ಮಿಶ್ರಣದ ಸರ್ಪಿಲ ಶಿಲೆಗಳ (ಜೊತೆಗೆ ರೂಪಾಂತರ ಹೊಂದದ ಆಲಿವೀನ್ ಸಹ ಸೇರಿದಂತೆ)  ಚೂರುಗಳುಳ್ಳ ದಟ್ಟವಾದ ಶಿಲೆಗೆ ಕ್ರಮೇಣ ಎಡೆ ಮಾಡಿಕೊಡುತ್ತದೆ. ಇದು ವಜ್ರಗಳ ಮಾತೃಶಿಲೆ ಎಂಬುದು ದೃಢಪಟ್ಟಿದೆ.  ಇದೇ ಪ್ರದೇಶದಲ್ಲಿ ಇನ್ನೊಂದು ಕಡೆಯಲ್ಲಿಯೂ ಇದೇ ಮಾದರಿಯ ಮತ್ತೊಂದು ನಳಿಗೆಯನ್ನು ಪತ್ತೆ ಮಾಡಲಾಗಿದೆ.

	ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಭೂವೈಜ್ಞಾನಿಕಾ ಸರ್ವೆ ಇಲಾಖೆಯವರು ನಡೆಸಿದ ಭೂಭೌತ ಅನ್ವೇಷಣೆಗಳಿಂದ, ಪನ್ನಾ ವಜ್ರಗಣಿಗಳಲ್ಲಿರುವ ಪ್ರದೇಶದಲ್ಲಿ ಮತ್ತಷ್ಟು ವಜ್ರಗಳನ್ನು ಒಳಗೊಂಡಿರುವ ಜ್ವಾಲಾಮುಖಿ ನಳಿಗೆಗಳು ಪತ್ತೆಯಾಗಿವೆ. ಪನ್ನ ಮತ್ತು ಮಜ್‍ಗವಾನ್ ಗಣಿಗಳ ಉತ್ತರಕ್ಕೆ ಸುಮಾರು 150 ಕಿಮೀ ಉದ್ದದ ವಜ್ರ ಭರಿತ ವಲಯವೊಂದು ಪತ್ತೆಯಾಗಿದೆ.

	ಪನ್ನ ಗಣಿಗಳಿಂದ ಉತ್ಪಾದಿಸಿದ ವಜ್ರಗಳು ದಾಖಲೆಯನ್ನೇ ಸ್ಥಾಪಿಸಿವೆ ಎನ್ನಬಹುದು.  ಉದಾಹರಣೆಗೆ ಮೊಘಲ್ ಚಕ್ರವರ್ತಿ ಅಕ್ಬರನ ಕಾಲದಲ್ಲಿ ಪನ್ನ ವಜ್ರ ಗಣಿಯೊಂದರಿಂದಲೆ 12 ಲಕ್ಷ ರೂಪಾಯಿ ವಾರ್ಷಿಕ ವರಮಾನ ರಾಜಾದಾಯ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗುತ್ತಿತ್ತು.

	ಹಿಂದೆ ಷಾಹಿದಾನ್ ಪ್ರದೇಶದ ಮಜ್‍ಗವಾನ್ ಗಣಿಗಳಿಂದ, ಪನ್ನ ಜಿಲ್ಲೆಯಲ್ಲಿಯ ಇತರ ಹೆಸರುವಾಸಿಯಾದ ವಜ್ರಗಳ ಜೊತೆಗೆ ಈ ಮುಂದಿನ ಅತ್ಯಮೂಲ್ಯ ವಜ್ರಗಳನ್ನು ಕೂಡ ಉತ್ಪಾದಿಸಲಾಯಿತು : ಗ್ರೇಟ್ ಮೊಘಲ್ (ತೂಕ 280 ಕ್ಯಾರೆಟ್), ಓರೆಲಾಫ್ (ತೂಕ 193 ಕ್ಯಾರೆಟ್) ಮತ್ತು ಬ್ಲೂಹೋಪ್, ಸಾಟ್ನಾದಿಂದ ಸುಮಾರು 72ಕಿಮೀ. ದೂರದಲ್ಲಿರುವ ಪನ್ನಾ ವಜ್ರಗಣಿಗಳಿಂದ 1964 ರಲ್ಲಿ 16.9 ಕ್ಯಾರೆಟ್ ತೂಕದ ಅಮೂಲ್ಯವಾದ ವಜ್ರವನ್ನು ತೆಗೆಯಲಾಯಿತು.

	ಪನ್ನ ಗಣಿಗಳಲ್ಲಿ ವಜ್ರಗಳಿಗಾಗಿ ಅನ್ವೇಷಣೆ ಮಾಡಿ ಗಣಿಗಳ ಉದ್ಯಮವನ್ನು ಸಮರ್ಪಕವಾಗಿ ನಡೆಸಲು ಆಧುನಿಕ ಯಂತ್ರೋಪಕರಣಗಳ ಹಾಗೂ ತಾಂತ್ರಿಕ ಕೌಶಲದ ನೆರವನ್ನು ಬೃಹತ್ ಗಾತ್ರದಲ್ಲಿ ಕೈಗೊಳ್ಳಲಾಗಿದೆ. ಸುಮಾರು 1.02 ಕೋಟಿ ರೂಪಾಯಿಗಳನ್ನು ಮೂಲ ಬಂಡವಾಳವಾಗಿ ಹೂಡುವ ಮೂಲಕ ಪನ್ನ ಡೈಮಂಡ್ ಮೈನಿಂಗ್ ಸಿಂಡಿಕೇಟ್ ಲಿಮಿಟೆಡ್ ಎಂಬ ಒಂದು ಖಾಸಗೀ ಸಂಸ್ಥೆಯನ್ನು ಸ್ಥಾಪಿಸಿತು. ಈ ಸಂಸ್ಥೆ 1939ರಿಂದಲೂ ಗಣಿ ಉದ್ಯಮದಲ್ಲಿ ತೊಡಗಿದ್ದ ಪನ್ನ ಮೈನಿಂಗ್ ಸಿಂಡಿಕೇಟನ್ನು ತನ್ನ ವಶಕ್ಕೆ ತೆಗೆದುಕೊಂಡಿತು.
(ಎಂ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ